ಜನಸಂಪರ್ಕ ವಿಚಾರದಲ್ಲಿ ಫೇಸ್ಬುಕ್, ಟ್ವಿಟ್ಟರ್ ನೆಚ್ಚಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಆ್ಯಪ್ ಕ್ಷೇತ್ರಕ್ಕೂ ಕಾಲಿಡಲಿದ್ದಾರೆ. ಸಾರ್ವಜನಿಕರ ಜತೆ ಸಂಪರ್ಕದಲ್ಲಿರಲು ಸಹಾಯಕವಾಗುವ 'ದಿ ಸಿಟಿಜೆನ್ ಕನೆಕ್ಟ್ ಆ್ಯಪ್'ಗೆ ಇಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಇದರ ಜತೆಗೆ ರೈತರ ಬೆಳೆ ಸಮೀಕ್ಷೆ ನಡೆಸುವ ಆ್ಯಪ್ ಗೂ ಅವರು ಚಾಲನೆ ನೀಡಲಿದ್ದಾರೆ. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.'ದಿ ಸಿಟಿಜೆನ್ ಕನೆಕ್ಟ್ ಆ್ಯಪ್' ಮೂಲಕ ಸರಕಾರದ ಕಾರ್ಯಕ್ರಮಗಳು, ಸಾಧನೆಗಳ ಕುರಿತು ತಾಜಾ ಮಾಹಿತಿ ಪಡೆಯಬಹುದು. ಜತೆಗೆ ಕುಂದುಕೊರತೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು. ಜತೆಗೆ ಮುಖ್ಯಮಂತ್ರಿಯವರು ನಡೆದು ಬಂದ ದಾರಿ, ನವ ಕರ್ನಾಟಕವನ್ನು ನಿರ್ಮಿಸುವ ಕುರಿತ ಅವರ ವಿಚಾರಗಳನ್ನು ಸಹ ತಿಳಿದುಕೊಳ್ಳಬಹುದು.ಈ ಆ್ಯಪ್ನಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಕ್ಷಣ ಕ್ಷಣದ ಸುದ್ದಿಗಳು, ಮುಖ್ಯಮಂತ್ರಿಗಳ ಬ್ಲಾಗ್, ಅವರ ಭಾಷಣ, ಸಂದರ್ಶನಗಳ ಮಾಹಿತಿ, ಲಿಂಕ್ ಲಭ್ಯವಾಗಲಿದೆ. ಬಳಕೆದಾರರು ಇಲಾಖಾವಾರು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯೊಂದಿಗೆ ಹಂಚಿಕೊಳ್ಳಲು ಇಲ್ಲಿ ಅವಕಾಶವಿದೆ. ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸುವುದು ಮತ್ತು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಆ್ಯಪ್ ಸಹಕಾರಿಯಾಗಲಿದೆ ಎಂದುಕೊಳ್ಳಲಾಗಿದೆ.
Category
🗞
News